ವಾಕ್ಯವಿಜ್ಞಾನ -
 	ವಿವರಣಾತ್ಮಕ ಭಾಷಾವಿಜ್ಞಾನದ ಒಂದು ಪ್ರಮುಖ ಶಾಖೆ. ವಾಕ್ಯರಚನೆಗಳ ವೈಜ್ಞಾನಿಕ ಅಧ್ಯಯನ (ಸಿಂಟ್ಯಾಕ್ಸ್). ಅರ್ಥಸಂಬಂಧವನ್ನು ಗುರುತಿಸಲು ವಾಕ್ಯಗಳಲ್ಲಿ ಪದಗಳು ವಿನ್ಯಾಸಗೊಂಡಿರುವ ರೀತಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ವಿಭಾಗ. ಪದಗಳನ್ನು ವ್ಯವಸ್ಥಿತವಾಗಿ ಜೋಡಿಸಿ, ಭಾಷೆಯ ದೊಡ್ಡ ಘಟಕವಾದ ವಾಕ್ಯವನ್ನು ರೂಪಿಸುವ ಅಧ್ಯಯನ. ಸಂಕ್ಷಿಪ್ತವಾಗಿ ಹೇಳುವುದಾದರೆ, ವಾಕ್ಯಗಳ ವ್ಯಾಕರಣ ವಿಚಾರವೇ ವಾಕ್ಯವಿಜ್ಞಾನ. ವಾಕ್ಯಗಳು ಮತ್ತು ಅವುಗಳ ಆಂತರಿಕ ರಚನೆಯನ್ನು ವಿವರಿಸಿ ತೋರಿಸುವುದು ಈ ಶಾಖೆಯ ಕೆಲಸ.

	ವ್ಯಾಖ್ಯೆ: 1. ಆಕೃತಿಮಾ ಮತ್ತು ಪದಗಳಿಂದಾದ ಪದಪುಂಜ, ವಾಕ್ಯಖಂಡ ಮತ್ತು ವಾಕ್ಯರಚನೆಗಳ ಅಧ್ಯಯನದ ವಿಷಯವೇ ವಾಕ್ಯವಿಜ್ಞಾನದ ವಸ್ತು (ಎನ್.ಕೃಷ್ಣಸ್ವಾಮಿ); 2. ಮುಕ್ತರೂಪಗಳನ್ನು ಒಳಗೊಂಡಿರುವ ರಚನೆಗಳ ವಿಶ್ಲೇಷಣೆಯೇ ವಾಕ್ಯವಿಜ್ಞಾನ (ಬ್ಲಾಕ್ ಮತ್ತು ಟ್ರೇಗರ್); 3. ದೊಡ್ಡರಚನೆಗಳ ವಿವರಣೆಯೇ ವಾಕ್ಯವಿಜ್ಞಾನ (ಎಚ್.ಎ.ಗ್ಲೀಸನ್); 4. ಪದಪುಂಜಗಳ ರಚನೆಯನ್ನು ಒಳಗೊಂಡಿರುವುದೇ ವಾಕ್ಯವಿಜ್ಞಾನ (ಲಿಯೊನಾರ್ಡ್ ಬ್ಲೂಮ್‍ಫೀಲ್ಡ್); 5. ಅವಿಭಾಜಕ ಆಕೃತಿಮಾಗಳು ಮತ್ತು ಅವುಗಳ ಜೋಡಣೆಗಳನ್ನು ಕುರಿತಾದ ಅಧ್ಯಯನವೇ ವಾಕ್ಯವಿಜ್ಞಾನ (ಸಿ.ಎಫ್.ಹಾಕೆಟ್).

	ವಾಕ್ಯ: ಒಂದು ಪೂರ್ಣಾರ್ಥವನ್ನು ಕೊಡುವಂತೆ ಸಮಂಜಸವಾಗಿ ಬಳಕೆಗೊಂಡ ಪದಸರಣಿಯೇ ವಾಕ್ಯ. ಇದು ಪೂರ್ಣಾರ್ಥಬೋಧಕ ಪದವ್ಯವಸ್ಥೆ. ಯಾವುದೇ ಒಂದು ಆಲೋಚನೆಯ ಸಮಗ್ರ ಅಭಿವ್ಯಕ್ತಿ ಎಂಬುದು ಸಾಂಪ್ರದಾಯಿಕ ವ್ಯಾಕರಣಕಾರರು ವಾಕ್ಯಕ್ಕೆ ಕೊಟ್ಟಿರುವ ವಿವರಣೆ. ಆಧುನಿಕ ಭಾಷಾವಿಜ್ಞಾನಿಗಳು ಈ ವಿವರಣೆಯನ್ನು ಒಪ್ಪುವುದಿಲ್ಲ. ಏಕೆಂದರೆ ಒಂದು ವಸ್ತುವಿನ ಬಗೆಗೆ ಒಂದು ಆಲೋಚನೆ ಯನ್ನು ಪ್ರಕಟಪಡಿಸಬಹುದು. ಆದರೆ ಅದನ್ನು ಸಮಗ್ರವಾಕ್ಯವೆಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ. ಚಳಿಯ ಕಾರಣದಿಂದ ನಾನು ಕಿಟಕಿ ಮುಚ್ಚಿದೆ. ಇದು ಕನ್ನಡದ ವಾಕ್ಯ. ಇದರಲ್ಲಿ ಒಂದೇ ಆಲೋಚನೆಯಿಲ್ಲ. ವಾಕ್ಯದಲ್ಲಿ ಕರ್ತೃ ಮತ್ತು ಕ್ರಿಯಾರ್ಥಗಳಿರುತ್ತವೆ ಎಂಬ ನಿಲುವನ್ನು ತಳೆದಿರುವ ಅನೇಕ ವ್ಯಾಕರಣಕಾರರುಂಟು. ಈ ನಿಲುವು ಗಡಿಯಾರ ಮೇಜಿನ ಮೇಲಿದೆ ರೀತಿಯ ವಾಕ್ಯಗಳಿಗೆ ಒಪ್ಪಿತವಾಗುತ್ತದೆ. ಏಕೆಂದರೆ ಈ ವಾಕ್ಯದಲ್ಲಿ ಕರ್ತೃ ಮತ್ತು ಕ್ರಿಯಾರ್ಥಗಳು ಸ್ಪಷ್ಟವಾಗಿವೆ. ಆದರೆ ಇಟ್ ಈಸ್ ರೈನಿಂಗ್ ಎಂಬ ಇಂಗ್ಲಿಷ್ ವಾಕ್ಯವನ್ನು ಗಡಿಯಾರ ಮೇಜಿನ ಮೇಲಿದೆ ಎಂಬ ವಾಕ್ಯದಂತೆ ಕರ್ತೃ ಮತ್ತು ಕ್ರಿಯಾರ್ಥಗಳಾಗಿ ವಿಭಜಿಸಲು ಸಾಧ್ಯವಾಗುವುದಿಲ್ಲ.

	ಬರೆಹವುಳ್ಳ ಭಾಷೆಗಳಲ್ಲಿ ವಾಕ್ಯಗಳನ್ನು ಗುರುತಿಸಲು ವಿರಾಮ ಚಿಹ್ನೆಗಳನ್ನು ಉಪಯೋಗಿಸುವರು. ಇಂಗ್ಲಿಷ್ ವಾಕ್ಯಗಳು ಸಾಮಾನ್ಯವಾಗಿ ದೊಡ್ಡಕ್ಷರದಿಂದ ಪ್ರಾರಂಭವಾಗಿ ಪೂರ್ಣವಿರಾಮ ಚಿಹ್ನೆಯೊಡನೆ ಅಥವಾ ಅನುಮಾನ, ಆಶ್ಚರ್ಯಸೂಚಕ ಇತ್ಯಾದಿ ಚಿಹ್ನೆಯೊಡನೆ ಮುಕ್ತಾಯ ಗೊಳ್ಳುತ್ತವೆ. ವಾಕ್ಯಗಳನ್ನು ಗುರುತಿಸುವ ಈ ವಿಧಾನ ಏಷ್ಯಖಂಡದ ಹಲವಾರು ಭಾಷೆಗಳಲ್ಲಿ ಕಂಡುಬರುವುದಿಲ್ಲ. ಆಡುಮಾತಿನಲ್ಲಿ ವಾಕ್ಯಗಳನ್ನು ಗುರುತಿಸುವುದು ಕೆಲವೊಮ್ಮೆ ಕಷ್ಟ. ವಾಕ್ಯನಿಲುಗಡೆಯ ಸೂಚಕವಾದ ಪೂರ್ಣವಿರಾಮದೊಡನೆ ಸ್ವರಲಹರಿ, ಲಯ, ಹೊಂದದಿರ ಬಹುದು. ಏಕೆಂದರೆ ಬರೆಹದಲ್ಲಿರುವಂಥ ಎಚ್ಚರಿಕೆ ಆಡುಮಾತಿನಲ್ಲಿ ಇರುವುದಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಆಕೃತಿಮಾಗಳು ವ್ಯಾಕರಣ ಅಧ್ಯಯನದ ತಳಹದಿಯಾದರೆ, ವಾಕ್ಯಗಳು ಅದರ ಉಪ್ಪರಿಗೆ ಸೋಪಾನಗಳು ಎಂಬ ವಿಚಾರ ವಿದಿತವಾಗುತ್ತದೆ.

	ಅನ್ವಯಾನುಕ್ರಮ: ವಾಕ್ಯದಲ್ಲಿ ಕರ್ತೃಪದ ಮೊದಲು, ಅನಂತರ ಕರ್ಮಪದ, ಕೊನೆಯಲ್ಲಿ ಕ್ರಿಯಾಪದ ಕಾಣಿಸಿಕೊಳ್ಳುತ್ತದೆ. ವಿಶೇಷಣಗಳು ಆಯಾಯ ಪದಗಳ ಹಿಂದೆ ಇರುತ್ತವೆ. ಇದು ಸಾಮಾನ್ಯ ನಿಯಮ. ಉದಾ: ಮಹಾಪರಾಕ್ರಮಿಯಾದ ಭೀಮನು ದುಷ್ಟನಾದ ದುರ್ಯೋಧನನನ್ನು ಬಲವಾದ ಗದಾಪ್ರಹಾರದಿಂದ ಕೊಂದನು.

	ಇಲ್ಲಿ ಭೀಮನು ಕರ್ತೃ, ದುರ್ಯೋಧನನ್ನು-ಕರ್ಮ, ಕೊಂದನು-ಕ್ರಿಯೆ. ಮೊದಲು ಕರ್ತೃಪದ, ಅದರ ಹಿಂದೆ ಆ ಕರ್ತೃಪದಕ್ಕೆ ವಿಶೇಷಣವಾದ ಮಹಾ-ಪರಾಕ್ರಮಿಯಾದ ಎಂಬ ವಿಶೇಷಣ, ಅನಂತರ ಕರ್ಮಪದ, ಅದರ ಹಿಂದೆ ಅದರ ವಿಶೇಷಣವಾದ ದುಷ್ಟನಾದ ಎಂಬ ವಿಶೇಷಣ. ಕೆಲವು ಸಂದರ್ಭಗಳಲ್ಲಿ, ಈ ವಿಶೇಷಣಗಳು ವಿಶೇಷ್ಯದ ಮುಂದೆಯೂ ಬರುವುದುಂಟು. ಅನಂತರ ಕ್ರಿಯಾಪದ; ಅದರ ಹಿಂದೆ ಯಾವ ಸಾಧನದಿಂದ ಕೊಂದನೋ ಆ ಸಾಧನವೇ ಕ್ರಿಯಾವಿಶೇಷಣವಾಗಿ ಕ್ರಿಯಾಪದದ ಹಿಂದೆ ಬಂದಿದೆ. ಈ ಅನ್ವಯಾನುಕ್ರಮ ವ್ಯತ್ಯಯವಾಗಿ ಹೀಗೂ ಆಗಬಹುದು.

ದುಷ್ಟನಾದ ದುರ್ಯೋಧನನನ್ನು, ಬಲವಾದ ಗದಾಪ್ರಹಾರದಿಂದ ಮಹಾಪರಾಕ್ರಮಿಯಾದ ಭೀಮನು ಕೊಂದನು.

	ಇಲ್ಲಿ ಮೊದಲು ಕರ್ಮಪದ ಮತ್ತು ಅದರ ವಿಶೇಷಣ, ಅನಂತರ ಕ್ರಿಯೆಗೆ ಸಾಧನವಾದ ಬಲವಾದ ಗದಾಪ್ರಹಾರದಿಂದ ಎಂಬ ಪದ, ಅನಂತರ ಮಹಾಪರಾಕ್ರಮಿಯಾದ ಭೀಮನು ಎಂಬ ಕರ್ತೃಪದ ಮತ್ತು ಅದರ ವಿಶೇಷಣ, ಕೊನೆಯಲ್ಲಿ ಕ್ರಿಯಾಪದ ಹೀಗೆ ಅನನ್ವಯವಾಗಿಯೂ ಇರುವುದುಂಟು. ಕನ್ನಡ ಕಾವ್ಯಗಳಲ್ಲಿ ಈ ರೀತಿ ವಿಶೇಷವಾಗಿ ಬರುತ್ತದೆ. ಏಕೆಂದರೆ ಕವಿ ಪ್ರಾಸ, ಛಂದಸ್ಸು, ಗಣ ಇತ್ಯಾದಿಗಳನ್ನು ಪಾಲಿಸುವುದಕ್ಕೋಸ್ಕರ ಕರ್ತೃ, ಕರ್ಮ, ಕ್ರಿಯಾಪದಗಳನ್ನು ಕ್ರಮವಾಗಿ ರಚಿಸಿರುವುದಿಲ್ಲ. ಪದ್ಯಕ್ಕೆ ಅರ್ಥ ಹೇಳುವಾಗ ಅನ್ವಯ ಕ್ರಮದಲ್ಲಿಯೇ ಹೇಳುವುದು ರೂಢಿ. ಹೀಗೆ ಪದ್ಯಕ್ಕೆ ಅರ್ಥ ಹೇಳುವುದನ್ನೇ ಅನ್ವಯಾನುಕ್ರಮದಲ್ಲಿ ಅರ್ಥ ವಿವರಣೆ ಮಾಡುವುದು ಎನ್ನುವರು. 

ಉದಾ: ಮಾಡಿಕೊಂಡನು ಪರಮ ಪುರುಷನ ಕೂಡ ತೋಟಿಯ ಸಿದ್ಧರಾಮನು

	ಇಲ್ಲಿ ಕ್ರಿಯಾಪದ ಮಾಡಿಕೊಂಡನು ಎಂಬುದು. ಇದು ಮೊದಲೇ ಬಂದಿದೆ.

	ಮಾಡಿಕೊಂಡನು ಎಂಬುದಕ್ಕೆ ಯಾರು ಎಂದು ಪ್ರಶ್ನಿಸಿದರೆ, ಸಿದ್ಧರಾಮನು ಎಂಬ ಕರ್ತೃಪದ ಬರುವುದು. ಏನನ್ನು ಮಾಡಿಕೊಂಡನು ಎಂದು ಪ್ರಶ್ನಿಸಿದಾಗ ತೋಟಿಯನು ಎಂಬ ಕರ್ಮಪದ ಬರುವುದು. ಹಾಗಾದರೆ ವಾಕ್ಯದಲ್ಲಿ ಸಿದ್ಧರಾಮನು ತೋಟಿಯ ಮಾಡಿಕೊಂಡನು ಹೀಗೆ ಕರ್ತೃ, ಕರ್ಮ, ಕ್ರಿಯಾ ಪದಗಳು ಕ್ರಮವಾಗಿ ಬರುವಂತೆ ಅರ್ಥ ಹೇಳುವುದೇ ಅನ್ವಯಾನುಕ್ರಮವೆನಿಸುವುದು. ಇದಕ್ಕೆ ವಿಶೇಷಣಗಳೇನಾದರೂ ಇದೆಯೇ ಎಂದು ಗಮನಿಸಬೇಕು. ಕರ್ತೃವಿಗಾಗಲಿ ಕರ್ಮಪದಕ್ಕಾಗಲಿ ಇಲ್ಲಿ ವಿಶೇಷಣಗಳು ಇಲ್ಲ. ಮಾಡಿಕೊಂಡನು ಎಂಬ ಕ್ರಿಯಾಪದಕ್ಕೆ ಪರಮಪುರುಷನ ಕೂಡ ಎಂಬ ಪದಸಮುಚ್ಚಯ ವಿಶೇಷಣವಾಗಿ ಬಂದಿದೆ. ಹೀಗೆ ಅನನ್ವಯವಾಗಿರುವ ವಾಕ್ಯಗಳನ್ನು ಅನ್ವಯಾನುಕ್ರಮದಲ್ಲಿ ಅರ್ಥ ಹೇಳಬೇಕಾದುದನ್ನು ಪ್ರಮುಖವಾಗಿ ಗಮನಿಸಬೇಕು.

	ಅಧ್ಯಾಹಾರ: ವಾಕ್ಯಗಳಲ್ಲಿ ಬಿಟ್ಟುಹೋಗಿರುವ ಪದಗಳನ್ನು ವಾಕ್ಯಾರ್ಥದ ಪೂರ್ತಿಗಾಗಿ ಇರುವ ಪದಗಳ ಆಧಾರದಿಂದಲೇ ಊಹಿಸಿಕೊಂಡು ಸೇರಿಸುವುದೇ ಅಧ್ಯಾಹಾರ.

ಉದಾ:	(1) ಕರ್ತೃಪದಗಳ ಅಧ್ಯಾಹಾರಕ್ಕೆ ಉದಾ:
	1. x ಈಗ ಹೋದಳು	(ಅವಳು)
	2. x ನಾಳೆ ಬರುತ್ತೇನೆ	(ನಾನು)
	3. x ಮೊನ್ನೆ ಬಂದರು	(ಅವರು)
	4. x ಒಂದು ವಾರದ ಅನಂತರ	(ನಾವು)
	   ಹೋಗೋಣ	

  (2) ಕರ್ಮಪದಗಳ ಅಧ್ಯಾಹಾರಕ್ಕೆ ಉದಾ:
	ಈಗ ತಾನೆ x ಅವಳು ತಿಂದಳು

ಇಲ್ಲಿ ಹಣ್ಣನ್ನು, ತಿಂಡಿಯನ್ನು ಇತ್ಯಾದಿ ಸಂದರ್ಭಕ್ಕೆ ಅನುಗುಣವಾಗಿ ಅಧ್ಯಾಹಾರ ಪದವನ್ನು ಊಹಿಸಬೇಕು.

(3) ಕ್ರಿಯಾಪದಗಳ ಅಧ್ಯಾಹಾರಕ್ಕೆ ಉದಾ:
	1. ಅವನ ಮನೆ ಎಲ್ಲಿ x ?	(ಇದೆ)
	2. ನಾನು ಪ್ರೌಢಶಾಲೆ ವಿದ್ಯಾರ್ಥಿ x 	(ಆಗಿದ್ದೇನೆ)
	3. ಅದು ಬಹಳ ಸಣ್ಣವಿಚಾರ x 	(ಆಗಿದೆ)
	4. ಎಲ್ಲವೂ ನನಗೇ x ಎಂದಳು	(ಬೇಕು)
	5. ನನಗೆ ಇಬ್ಬರು ಮಕ್ಕಳು x 	(ಇದ್ದಾರೆ)
	6. ಚೈತ್ರ ಬಂದಳು, ಪಲ್ಲವಿ ಕೂಡ x 	(ಬಂದಳು)

ವಾಕ್ಯಪ್ರಕಾರಗಳು: ಸಾಂಪ್ರದಾಯಿಕವಾಗಿ ಮೂರು ಬಗೆಯ ವಾಕ್ಯಗಳುಂಟು.

	ಸಾಮಾನ್ಯವಾಕ್ಯ: ಒಂದು ಪೂರ್ಣಕ್ರಿಯಾಪದವನ್ನುಳ್ಳ ಸ್ವತಂತ್ರವಾಕ್ಯವೇ ಸಾಮಾನ್ಯವಾಕ್ಯ. ಇದರಲ್ಲಿ ಸಾಪೇಕ್ಷ ಕ್ರಿಯಾರೂಪಗಳು ಮಧ್ಯದಲ್ಲಿ ಬರಬಹುದು. ಉದಾ: ಬೆಂಗಳೂರು ಮಲೇರಿಯದಿಂದ ಕೂಡಿ, ವೆಂಕಟೇಶಯ್ಯನವರ ಆರೋಗ್ಯದ ಮೇಲೆ ದುಷ್ಟಪರಿಣಾಮ ಮಾಡಿ, ಅವರು ಅಲ್ಲಿಂದ ವರ್ಗವಾಗುವಂತೆ ಮಾಡಿತು. ಇಲ್ಲಿ ಮಾಡಿತು ಎಂಬ ಒಂದೇ ಕ್ರಿಯಾಪದವಿದ್ದು ಕೂಡಿ, ಮಾಡಿ ಎಂಬ ಸಾಪೇಕ್ಷ ಕ್ರಿಯೆಗಳು ಮಧ್ಯದಲ್ಲಿ ಬಂದಿವೆ.

	ಸಂಯೋಜಿತ ವಾಕ್ಯ: ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ, ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆ, ಅದು ಸಂಯೋಜಿತವಾಕ್ಯ. ಇದರಲ್ಲಿಯ ಉಪವಾಕ್ಯಗಳನ್ನು ಆದರೆ, ಮುಂತಾದ ಸಂಬಂಧ ಸೂಚಕಾವ್ಯಯಗಳು ಕೂಡಿಸುತ್ತವೆ. ಉದಾ: ಮಂಜ ಹಣ್ಣನ್ನು ತಂದನು; ಆದರೆ ನಂಜಿಗೆ ಕೊಡಲಿಲ್ಲ. ಕೆಲವೊಮ್ಮೆ ಉಪವಾಕ್ಯಗಳು ಸಂಬಂಧಸೂಚಕಾವ್ಯಯದ ನೆರವಿಲ್ಲದೆ ಒಟ್ಟು ಗೂಡುತ್ತವೆ. ಉದಾ: ಅವರ ಪೈಕಿ ಕೆಲವರು ಕುಣಿಯುತ್ತಿದ್ದರು; ಕೆಲವರು ಕೇಕೆ ಹಾಕುತ್ತಿದ್ದರು. 

	ಮಿಶ್ರವಾಕ್ಯ: ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನವಾಕ್ಯಕ್ಕೆ ಅಧೀನಗಳಾಗಿದ್ದರೆ ಅದು ಮಿಶ್ರವಾಕ್ಯ. ಉದಾ: ತೇಜಸ್ವಿಗೆ ವಿದ್ಯಾರ್ಥಿ ವೇತನ ಸಿಕ್ಕಿತೆಂಬುದನ್ನು ಅವನಿಂದಲೇ ಕೇಳಿದೆನು. ಇಲ್ಲಿ ಕೇಳಿದೆನು ಎಂಬುದು ಪ್ರಧಾನ ಕ್ರಿಯಾಪದ. ಇದಕ್ಕೆ ಮೊದಲನೆಯ ವಾಕ್ಯವಾದ ತೇಜಸ್ವಿಗೆ ವಿದ್ಯಾರ್ಥಿ ವೇತನ ಸಿಕ್ಕಿತೆಂಬುದನ್ನು ಎಂಬುದು ಕರ್ಮವಾಗಿ ಅಧೀನ ವಾಕ್ಯವಾಗಿದೆ. ಕೇಳಿದೆನು ಎಂಬ ಕ್ರಿಯಾಪದದ ಕರ್ತೃ ಇಲ್ಲಿ ಹೇಳಲ್ಪಟ್ಟಿಲ್ಲ. ನಾನು ಎಂದು ಅಧ್ಯಾಹಾರ ಮಾಡಿಕೊಳ್ಳಬೇಕಾಗುತ್ತದೆ.

	ವಾಕ್ಯಪರಿವರ್ತನೆ: ಕೆಲವು ವ್ಯತ್ಯಾಸಗಳನ್ನು ಮಾಡಿ ಸಂಯೋಜಿತ ಹಾಗೂ ಮಿಶ್ರವಾಕ್ಯಗಳನ್ನು ಸಾಮಾನ್ಯವಾಕ್ಯಗಳನ್ನಾಗಿ ಪರಿವರ್ತಿಸ ಬಹುದಾದ ಸಾಧ್ಯತೆಗಳಿವೆ.
(1) ಸಂಯೋಜಿತ>ಸಾಮಾನ್ಯ

ಉದಾ: ಅವನ ಹೆಂಡತಿ ಸತ್ತಳು. ಆದರೂ ಅವನು ಮನೆಯನ್ನು ಬಿಡಲಿಲ್ಲ, (ಸಂಯೋಜಿತ ವಾಕ್ಯ) ಹೆಂಡತಿ ಸತ್ತರೂ ಅವನು ಮನೆಯನ್ನು ಬಿಡಲಿಲ್ಲ (ಸಾಮಾನ್ಯ ವಾಕ್ಯ)

(2) ಮಿಶ್ರ>ಸಾಮಾನ್ಯ

ಉದಾ: ಊರಿಗೆ ಬಂದವಳು ನೀರಿಗೆ ಬರುತ್ತಾಳೆಂಬುದು ನಿನಗೆ ಗೊತ್ತಿಲ್ಲವೇ? (ಮಿಶ್ರವಾಕ್ಯ) ಊರಿಗೆ ಬಂದವಳು ನೀರಿಗೆ ಬರುವುದು ನಿನಗೆ ಗೊತ್ತಿಲ್ಲವೇ? (ಸಾಮಾನ್ಯವಾಕ್ಯ)

	ಸಂಯೋಜಿತ ಮತ್ತು ಮಿಶ್ರವಾಕ್ಯಗಳನ್ನು ಸಾಮಾನ್ಯವಾಕ್ಯಗಳನ್ನಾಗಿ ಪರಿವರ್ತಿಸುವಾಗ ಉಪವಾಕ್ಯಗಳಲ್ಲಿನ ಪೂರ್ಣಕ್ರಿಯಾಪದಗಳಿಗೆ ಬದಲಾಗಿ ಸಾಪೇಕ್ಷಕ್ರಿಯಾಪದ, ಕೃದಂತ ಭಾವನಾಮ ಮತ್ತು ಕೃದಂತ ನಾಮಗಳನ್ನು ಸಂದರ್ಭೋಚಿತವಾಗಿ ಬಳಸಬೇಕು.

	ವಾಕ್ಯರಚನೆಗಳು: ಪೂರ್ವಪದ ಅಥವಾ ಉತ್ತರ ಪದಗಳಲ್ಲಿಯ ಅರ್ಥ ಅಡಕಗೊಂಡು ಕೇಂದ್ರೀಕೃತವಾಗಿದ್ದರೆ ಅಂಥ ರಚನೆಯನ್ನು ಅಂತಃ ಕೇಂದ್ರೀಯ ರಚನೆ ಎನ್ನುವರು. ಎಂದರೆ ಕೇಂದ್ರರೂಪದ ಪ್ರಸಾರವರ್ಗವನ್ನು ಹೊಂದಿ ತನ್ನಲ್ಲಿಯೇ ಕೇಂದ್ರವನ್ನುಳ್ಳ ರಚನೆಗಳು. ಉದಾ: ಒಳ್ಳೆಯ ಹುಡುಗಿ, ಕೆಂಪು ಟೋಪಿ, ಬಿಳಿ ಅಂಗಿ, ಕೆಟ್ಟವ್ಯಕ್ತಿ. ಈ ಉದಾಹರಣೆಗಳಲ್ಲಿ ಕೇಂದ್ರ ಘಟಕದ ಪ್ರಸಾರವರ್ಗ ಹಾಗೂ ಫಲಿತರೂಪದ ಪ್ರಸಾರವರ್ಗ ಒಂದೇ ಆಗಿವೆ. ಹುಡುಗಿ, ಟೋಪಿ, ಅಂಗಿ, ವ್ಯಕ್ತಿ ಇವು ಕೇಂದ್ರ ಘಟಕಗಳು. ಇವು ನಾಮಪದವರ್ಗಕ್ಕೆ ಸೇರಿದರೆ ಉಳಿದ ಘಟಕಗಳು ವಿಶೇಷಣಗಳಾಗಿ ಕಾರ್ಯ ನಿರ್ವಹಿಸಿವೆ. ಇಲ್ಲಿ ಫಲಿತರೂಪದ ಪ್ರಸಾರವರ್ಗ ನಾಮಪದವರ್ಗವೇ ಆದ್ದರಿಂದ ತನ್ನಲ್ಲಿಯೇ ಕೇಂದ್ರವನ್ನೊಳಗೊಂಡ ಇವೆಲ್ಲವೂ ಅಂತಃಕೇಂದ್ರೀಯ ರಚನೆಗಳು. ಈ ಬಗೆಯ ರಚನೆಗಳಲ್ಲಿ:

1. ನಾಮಪದ + ನಾಮಪದ > ನಾಮಪದವಾಗಬಹುದು
  ಉದಾ: ಕಸ+ಕಡ್ಡಿ=ಕಸಕಡ್ಡಿ, ಮಳೆ+ಕಾಲ=ಮಳೆಗಾಲ

2. ವಿಶೇಷಣ + ನಾಮಪದ > ನಾಮಪದವಾಗಬಹುದು
  ಹೊಸ+ಕನ್ನಡ=ಹೊಸಗನ್ನಡ, ಬಿರು+ಗಾಳಿ=ಬಿರುಗಾಳಿ

3. ಕರ್ಮಪದ + ಕೃದಂತ > ಕೃದಂತವಾಗಬಹುದು
  ಕೈಯನ್ನು+ಹಿಡಿದ=ಕೈಹಿಡಿದ, ಮನವನು+ಸೆಳೆದ=ಮನಸೆಳೆದ

4. ಕೃದಂತ + ನಾಮಪದ > ನಾಮಪದವಾಗಬಹುದು
 ಕಡೆಯುವ+ಕೋಲು=ಕಡೆಗೋಲು, ಸಿಡಿಯುವ+ಮದ್ದು=ಸಿಡಿಮದ್ದು

5. ಸಂಖ್ಯಾವಾಚಕ + ನಾಮಪದ > ನಾಮಪದವಾಗಬಹುದು
  ಷಟ್+ಕೋನ=ಷಟ್ಕೋನ, ಮೂರು+ಹುರಿ=ಮುಪ್ಪುರಿ

6. ಸಂಖ್ಯಾವಾಚಕ + ಸಂಖ್ಯಾವಾಚಕ > ಸಂಖ್ಯಾವಾಚಕ
  ಇರ್+ಪತ್ತು=ಇಪ್ಪತ್ತು, ಮೂರು+ಪತ್ತು=ಮೂವತ್ತು.

	ಪೂರ್ವಪದ ಹಾಗೂ ಉತ್ತರ ಪದಗಳಲ್ಲಿ ಯಾವುದರಲ್ಲಿಯೂ ಅರ್ಥಕೇಂದ್ರೀಕೃತವಾಗಿರದಿದ್ದರೆ ಅಂಥ ರಚನೆ ಬಹಿಃಕೇಂದ್ರೀಯ ರಚನೆ ಎನ್ನುವರು. ಕೆಲವು ರಚನೆಗಳಲ್ಲಿ ಕೇಂದ್ರ ಆ ರಚನೆಯ ಹೊರಗಡೆ ಇರುವುದು. ಇಲ್ಲಿ ಘಟಕಗಳು ತಮ್ಮದೇ ಆದ ಅರ್ಥ ಪಡೆದಿದ್ದು ಫಲಿತ ರೂಪದಲ್ಲಿ ಆ ಅರ್ಥವನ್ನು ಕಳೆದುಕೊಂಡು ಬೇರೆಯೇ ಆದ ಅರ್ಥ ಗೋಚರವಾಗುತ್ತದೆ. ಇದು ಕೇಶಿರಾಜ ಹೇಳುವ ಬಹುವ್ರೀಹಿ ಸಮಾಸವೇ ಆಗಿದೆ.

ಉದಾ:	ಹಣೆ+ಕಣ್ಣ=ಹಣೆಗಣ್ಣ	(ಶಿವ)
	ನೀಲ+ಕಂಠ=ನೀಲಕಂಠ	(ಶಿವ)
	ಚತುರ್+ಮುಖ=ಚತುರ್ಮುಖ	(ಬ್ರಹ್ಮ)
	ಗಜ+ಆನನ=ಗಜಾನನ	(ಗಣೇಶ)

	ವಾಕ್ಯವಿಶ್ಲೇಷಣೆ: ವಾಕ್ಯದ ಬಗೆ ಯಾವುದೇ ಆದರೂ ಆ ವಾಕ್ಯದಲ್ಲಿ ಸೇರ್ಪಡೆಯಾಗಿರುವ ಪದ ಅಥವಾ ಪದಸಮುಚ್ಚಯ ರೂಪವಾದ ಘಟಕಗಳನ್ನು ವಿಭಜಿಸಿ, ಅವುಗಳ ಪರಸ್ಪರ ಸಂಬಂಧವನ್ನು ತೋರಿಸುವುದು ವಾಕ್ಯ ವಿಶ್ಲೇಷಣೆ. ಹೀಗೆ ಒಂದು ವಾಕ್ಯವನ್ನು ವಿಭಜಿಸುವುದರಿಂದ, ಅದರ ರಚನೆ ಸ್ಪಷ್ಟವಾಗುತ್ತದೆ.

ಉದಾ: ಒಳ್ಳೆಯ ವ್ಯಕ್ತಿ ಕೆಟ್ಟ ಆಲೋಚನೆಯನ್ನಾಗಲಿ, ಕೆಲಸವನ್ನಾಗಲಿ ಎಂದೂ ಮಾಡುವುದಿಲ್ಲ.

ಕರ್ತೃವಿಶೇಷಣ	ಕರ್ತೃಪದ	ಕರ್ಮವಿಶೇಷಣ	ಕರ್ಮಪದ
ಒಳ್ಳೆಯ	ವ್ಯಕ್ತಿ	ಕೆಟ್ಟ	1. ಆಲೋಚನೆಯನ್ನು
			2. ಕೆಲಸವನ್ನು

ಕ್ರಿಯಾವಿಶೇಷಣ	ಕ್ರಿಯಾಪದ	ಸಂಬಂಧಸೂಚಕ
ಎಂದೂ 	ಮಾಡುವುದಿಲ್ಲ	1. ಆಗಲಿ 2. ಆಗಲಿ

	ನಿಕಟತಮ ಘಟಕಗಳ ವಿಶ್ಲೇಷಣೆ (ಇಮ್ಮೀಡಿಯಟ್ ಕಾನ್ಸ್‍ಟಿಟ್ಯೂ ಯೆಂಟ್ ಅನಾಲಿಸಿಸ್): ವಾಕ್ಯರಚನೆಯನ್ನು ಅನಾವರಣಗೊಳಿಸುವ ಯಶಸ್ವಿ ವಿಧಾನಗಳ ಪೈಕಿ ಈ ವಿಶ್ಲೇಷಣೆಯೂ ಒಂದು. 1933ರಲ್ಲಿ ಈ ವಿಧಾನವನ್ನು ಲಿಯೊನಾರ್ಡ್ ಬ್ಲೂಮ್‍ಫೀಲ್ಡ್ ಪರಿಚಯಿಸಿದ. ಹ್ಯಾರಿಸ್ ಮತ್ತು ವೆಲ್ಸ್ ಎಂಬ ಭಾಷಾತಜ್ಞರು ಈ ವಿಧಾನವನ್ನು ಜನಪ್ರಿಯಗೊಳಿಸಿದರು. ವಾಕ್ಯದ ಮೂಲಘಟಕಗಳನ್ನು ಮತ್ತು ಅವುಗಳ ಪರಸ್ಪರ ಸಂಬಂಧವನ್ನು ಗುರುತಿಸುವುದೇ ಈ ವಿಧಾನದ ಪ್ರಮುಖ ಉದ್ದೇಶ. ಯಾವುದೇ ರಚನೆಗೆ ನೇರವಾಗಿ ಸಂಬಂಧವುಳ್ಳ ಘಟಕಗಳು ಆ ರಚನೆಯ ಹತ್ತಿರದ ಘಟಕಗಳಾಗುತ್ತವೆ. ಇವನ್ನು ವಾಕ್ಯರಚನೆಯಂತಹ ದೊಡ್ಡರಚನೆಯಲ್ಲಿ ಘಟಕಗಳ ಸಂಬಂಧವನ್ನು ಗುರುತಿಸುವಾಗ ಗ್ರಹಿಸಬಹುದಾಗಿದೆ. ಈ ವಿಧಾನ ವಾಕ್ಯರಚನೆಯ ಬೇರೆ ಬೇರೆ ಸ್ತರಗಳಲ್ಲಿ ಹಂತ ಹಂತವಾಗಿ ಕಾರ್ಯೋನ್ಮುಖವಾಗುತ್ತದೆ. ಪ್ರತಿಯೊಂದು ಸ್ತರದಲ್ಲೂ ಒಂದು ರಚನೆಯನ್ನು ಅದರ ಪ್ರಮುಖ ಘಟಕಗಳನ್ನಾಗಿ ವಿಭಜಿಸುತ್ತಾ ಹೋಗುತ್ತದೆ. ವಿಭಜನೆಯ ಪ್ರಕ್ರಿಯೆ ಸಾಧ್ಯವಾಗದ ಹಂತದಲ್ಲಿ ಇದು ತನ್ನ ಕಾರ್ಯವನ್ನು ಮುಕ್ತಾಯದ ಹಂತಕ್ಕೆ ತರುತ್ತದೆ. ಉದಾ: ಪ್ರತಿಮಾ ಶಾಲೆಗೆ ಹೋದಳು ಎಂಬ ವಾಕ್ಯದಲ್ಲಿ ಪ್ರತಿಮಾ ಮತ್ತು ಶಾಲೆಗೆ ಹೋದಳು ಎಂಬ ಎರಡು ನಿಕಟತಮ ಘಟಕಗಳನ್ನು ಗುರುತಿಸಬಹುದು. ಇದೇ ವಾಕ್ಯದಲ್ಲಿ ಪ್ರತಿಮಾ ಶಾಲೆಗೆ ಎಂಬ ಘಟಕಗಳು ನೇರವಾದ ಸಂಬಂಧವನ್ನು ಹೊಂದಿರದೆ ಶಾಲೆಗೆ ಹೋದಳು ಪ್ರತಿಮಾ ಹೋದಳು ಎಂಬ ಘಟಕಗಳು ನೇರವಾದ ಸಂಬಂಧವನ್ನು ಪಡೆದಿವೆ. ಹೀಗೆ ವಾಕ್ಯದಲ್ಲಿಯ ಘಟಕದ ರಚನಾತ್ಮಕ ಮತ್ತು ಅರ್ಥಾತ್ಮಕ ಸಂಬಂಧ ಯಾವ ಯಾವ ಘಟಕದೊಡನೆ ಇದೆ ಎಂಬುದನ್ನು ಕಂಡುಕೊಳ್ಳುವ ಕ್ರಮವನ್ನೇ ನಿಕಟತಮ ಘಟಕಗಳ ವಿಶೇಷಣೆ ಎನ್ನಲಾಗುವುದು. ಪ್ರತಿಮಾ ಎಂಬುದು ಒಂದು ಘಟಕವಾದಂತೆ. ಶಾಲೆಗೆ ಎಂಬುದು ಮತ್ತೊಂದು ಘಟಕ. ಇದನ್ನು ಶಾಲೆ ಮತ್ತು-ಗೆ ಎಂಬುದಾಗಿ ಎರಡು ಘಟಕಗಳನ್ನಾಗಿ ಮತ್ತೆ ವಿಭಜಿಸಬಹುದು. ಅಂತೆಯೇ ಹೋದಳು ಎಂಬ ಘಟಕವನ್ನು ಹೋಗು+ದ್+ಅಳು ಎಂಬುದಾಗಿ ವಿಭಜಿಸಬಹುದು.

	ಒಂದು ವಾಕ್ಯದ ಘಟಕಗಳನ್ನು ಅವುಗಳ ಅರ್ಥಕ್ಕನುಗುಣವಾಗಿ ಚಿಕ್ಕಚಿಕ್ಕ ಘಟಕಗಳನ್ನಾಗಿ ವಿಭಜಿಸಬಹುದು. ಅರ್ಥವತ್ತಾದ ರಚನೆಗಳನ್ನು ಗುರುತಿಸಿ, ಘಟಕಗಳನ್ನು ವಿಭಜಿಸುವ ಪ್ರಕ್ರಿಯೆ ಮತ್ತು ಅವುಗಳ ಸಂಬಂಧವನ್ನು ಕಂಡುಕೊಳ್ಳುವ ಕ್ರಮವೇ ನಿಕಟತಮ ಘಟಕದ ಅಧ್ಯಯನ ವಸ್ತು. ನಿಕಟತಮಘಟಕಗಳನ್ನು ವೃಕ್ಷರೇಖಾಚಿತ್ರದ ಮೂಲಕವಾಗಲೀ ಅಥವಾ ಆವರಣಗಳನ್ನು ಬಳಸುವುದರ ಮೂಲಕವಾಗಲೀ ವಿವರಿಸುವುದು ಸಾಧ್ಯವಾಗಿದೆ.

	ನಿಕಟತಮ ಘಟಕಗಳ ವಿಶ್ಲೇಷಣಾ ವಿಧಾನವೇ ಅಲ್ಲದೆ ಪ್ರರೂಪಾತ್ಮ (ಟ್ರ್ಯಾಗ್ಮೆಮಿಕ್) ಈ ವಿಶ್ಲೇಷಣೆ (ಅನಾಲಿಸಿಸ್) ಸ್ತರಾತ್ಮಕ ವಿಶ್ಲೇಷಣೆ (ಸ್ಟ್ರ್ಯಾಟಿಫಿಕೇಶನಲ್), ರೂಪಾಂತರಣ ಉತ್ಪಾದನಾ ವಿಶ್ಲೇಷಣೆ (ಟ್ರಾನ್ಸ್‍ಫಾರ್ಮೇಷನಲ್ ಜನರೇಟಿವ್ ಅನಾಲಿಸಿಸ್), ಸರಾತ್ಮಕ ವಿಶ್ಲೇಷಣೆ (ಸ್ಟಿಂಗ್ ಅನಾಲಿಸಿಸ್) ಮೊದಲಾದ ವಿಧಾನಗಳು ವಾಕ್ಯವಿಶ್ಲೇಷಣೆಗೆ ನೆರವಾಗಿವೆ.		
	(ಆರ್.ಎಮ್.ಕೆ.)
7

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ